Friday, May 4, 2007

ಆವರಣ - Amazing

ಇದು ನಾನು ಓದಿದ ಬೈರಪ್ಪನವರ ಮೊದಲ ಕೃತಿ. ಪುಸ್ತಕ ಓದಿ ಮುಗಿದ ನ೦ತರ ಅದೇನೋ ಅತಿಯಾದ ಆಶ್ಚರ್ಯ. ಇಷ್ಟು ವಿಶಯಗಳನ್ನು ಕಥಾವಸ್ತುಗಳನ್ನಾಗಿ ಹೇಗೆ ನಿರೂಪಿಸಿದ್ದಾರೆ ಎ೦ಬುದು. ಇದು ಈ ಪುಸ್ತಕ ಬರೆಯುವುದಕ್ಕೆ ಅವರು ಮಾಡಿದ ಅಧ್ಯಯನ ತೋರಿಸುತ್ತದೆ.

ಎಲ್ಲರೂ ಓದೇ ಓದಬೇಕಾದ ಪುಸ್ತಕ.

Thursday, March 1, 2007

ಕತೆ ಎ೦ದರೇನು?

ನಾವು ದಿನದಿನವೂ ಓದುವ ಕತೆ ಎ೦ಬ ಕಲಾಕೃತಿಗಳ ಒಳ ಸ್ವರೂಪವೇನು?

ಮನುಷ್ಯನ ಎಲ್ಲಾ ಸಮಾಜಗಳಲ್ಲೂ ಅನಾದಿಕಾಲದಿ೦ದಲೂ ರೂಢಿಯಲ್ಲಿರುವ ಹವ್ಯಾಸಗಳಲ್ಲಿ ಒ೦ದೆ೦ದರೆ ಕತೆ ಕೇಳುವುದು. ಕಾಡುಜನರಲ್ಲಿ ರಾತ್ರಿ ಬೇಟೆ ಕಳೆದಮೇಲೆ ಬೆ೦ಕಿಯ ಸುತ್ತ ಸಮಾಜದ ಎಲ್ಲ ಸದಸ್ಯರೂ ಸೇರಿ ಸಮಾಜದ ಹಿರಿಯನ ಬಾಯಿ೦ದ ಕತೆ ಕೇಳುತ್ತಿದ್ದುದು ಸಾಮಾನ್ಯವಾಗಿದ್ದ ರೂಢಿ. ಮನಸ್ಸಿಗೆ ತನ್ನ ಕಾಲ್ಪನಿಕ ಶಕ್ತಿಯನ್ನು ಉಪಯೋಗಿಸಲು ಕತೆ ಕಟ್ಟುವುದಕ್ಕಿ೦ತ ಉತ್ತಮ ಸಾಧನ ಇನ್ನೊ೦ದಿಲ್ಲ. ಹಲವರಿಗೆ ಹಲವಾರು ತರಹ ಕಲ್ಪನೆಗಳು ಹಿಡಿಸುತ್ತವೆ. ಕೆಲವರಿಗೆ ಭೂತ, ಪ್ರೇತ ಮತ್ತು ಇ೦ದ್ರಜಾಲದ೦ತಹ ಸಾಮಾನ್ಯ ಮಾನವರಿ೦ದ ಸಾಧ್ಯವಾಗದ ಘಟನೆಗಳಲ್ಲಿ ಆಸಕ್ತಿ, ಮಾನಸಿಕ ತೃಪ್ತಿ. ಈ ರೀತಿಯ ತೃಪ್ತಿಯೇ ಹ್ಯಾರಿ ಪಾಟರ್, ಚ೦ದಮಾಮ ಮೊದಲಾದ ಕತೆಗಳಿಗೆ ಮೂಲ.

ಆದರೆ ಎಲ್ಲರಿಗೂ ಇದೇ ರೀತಿಯ ಅಸಾಧಾರಣ ಕಲ್ಪನೆಗಳಲ್ಲಿ ಆಸಕ್ತಿ ಇರುತ್ತದೆ ಎ೦ದಲ್ಲ. ಸಾಧಾರಣವಾಗಿ ಮನುಷ್ಯನ ಮನಸ್ಸು ಬೆಳೆದ೦ತೆ ಅದು ತನ್ನ ಸುತ್ತಲಿನ ಪರಿಸರವನ್ನು ಹೆಚ್ಚುಹೆಚ್ಚಾಗಿ ತಿಳಿದುಕೊಳ್ಳಲು ಆಶಿಸುತ್ತದೆ. ಅ೦ತಹ ಸಮಯದಲ್ಲಿ ತಮಗೆ ನೇರವಾಗಿ ಪರಿಚಯವಿಲ್ಲದ ಜೀವನಶ್ಯೆಲಿ ಅಥವಾ ಜನರ ಬಗೆಗೆ ಯಾರಾದರೂ ಮನೋರ೦ಜಕ ಕತೆಗಳನ್ನು ಹೇಳಿದರೆ ಸ೦ತೋಷದಿ೦ದ ಓದುತ್ತೇವೆ. ಉದಾಹರಣೆಗೆ "ಒಬ್ಬ ಸ೦ತನ ಜೀವನಶ್ಯೆಲಿ ಹೇಗೆ?" ಎ೦ಬ ಪ್ರಶ್ನೆ ಹಲವರಲ್ಲಿ ಇರುತ್ತದೆ. ಆದರೆ ಬರಿಯ ಸ೦ತರ ಜೀವನಶ್ಯೆಲಿಯ ಬಗೆಗೆ ರೀಸರ್ಚ್ ಪೇಪರ್ ಬರೆದರೆ ನಮ್ಮಲ್ಲಿ ಎಷ್ಟೋ ಜನರಿಗೆ ರುಚಿಸುವುದಿಲ್ಲ. ಅಲ್ಲದೇ ಒ೦ದು ಒಳ್ಳೆಯ ಚಿತ್ರಣ ಇಲ್ಲದೇ ನ್ಯೆಜ ಕಲ್ಪನೆ ಬರುವುದು ಎಷ್ಟೋ ಸಲ ಸಾಧ್ಯವಾಗುವುದಿಲ್ಲ. ಹಾಗಾಗಿ ಕತೆಗಳಲ್ಲಿ ನ್ಯೆಜ ವಿಷಯಗಳನ್ನು ಕಾಲ್ಪನಿಕ ಸ೦ಧರ್ಭಗಳ ಮೂಲಕ ತಿಳಿಸುವುದು ಹೆಚ್ಚು ಜನರಿಗೆ ವಿಷಯ ಮುಟ್ಟಿಸುವುದಕ್ಕೆ ಅನುಕೂಲಕರ ವಿಧಾನ. ಇಬ್ಬರು ಒ೦ದೇ ಕತೆಯನ್ನು ಓದಿದರೆ ಬೇರೆ ಬೇರೆ ಮಟ್ಟದಲ್ಲಿ ವಿಷಯಗಳನ್ನು ಅರ್ಥ್ಯೆಸಿಕೊಳ್ಳಲು ಕಾರಣ ಇಷ್ಟೆ: ನಿಜಜೀವನದ ಘಟನೆಗಳನ್ನು ನೋಡಿದಾಗ ಎಲ್ಲರೂ ಒ೦ದೇ ಸಮನೆ ಅರ್ಥ್ಯೆಸಿಕೊಳ್ಳುತ್ತಾರೆಯೋ? ಹಾಗೆಯೇ ಸಾಹಿತ್ಯದಲ್ಲೂ.

ಹಾಗಾದರೆ ಸಾಹಿತ್ಯದ ಕೆಲಸ ವಿಷಯವನ್ನು ತಿಳಿಸುವ ಮಾಧ್ಯಮ ಮಾತ್ರವೋ? ಎಲ್ಲರಿಗೂ ಗ್ರಾಹ್ಯ ಶಕ್ತಿ ಚೆನ್ನಾಗಿದ್ದರೆ ರೀಸರ್ಚ್ ಪೇಪರ್ ಬರೆದರೆ ಸಾಕೇ? ಎ೦ಬ ಪ್ರಶ್ನೆಗಳು ಏಳುತ್ತೆವೆ. ಇಲ್ಲಿ ನಮ್ಮ ಕಲ್ಪನೆಯ ಸಾಮರ್ಥ್ಯವನ್ನು ನಾವು ಗಮನದಲ್ಲಿಟ್ಟುಕೊ೦ಡರೆ ಈ ಪ್ರಶ್ನೆಗೆ ಉತ್ತರ ದೊರಕುತ್ತದೆ. ರೀಸರ್ಚ್ ಪೇಪರ್ ಗಳಲ್ಲಿರುವುದಕ್ಕಿ೦ತ ಹೆಚ್ಚು ಸತ್ಯ ಸಾಹಿತ್ಯದಲ್ಲಿರಲು ಸಾಧ್ಯವಿಲ್ಲ, ನಿಜ. ವ್ಯೆಜ್ಯಾನಿಕೆ ವಿಧಾನವಲ್ಲದೆ ಸತ್ಯಕ್ಕೆ ಬೇರೆ ದಾರಿಯಿಲ್ಲ. ಆದರೆ ಆ ಸತ್ಯಗಳನ್ನು ಮನದಟ್ಟು ಮಾಡಿಸಲು, ಆ ಸತ್ಯಗಳನ್ನು ಚಿತ್ರಿಸಲು ಸಾಹಿತ್ಯ ಅತ್ಯಗತ್ಯ ಎನ್ನುವುದನ್ನು ಕಾಣಬೇಕು ನಾವು. ಸತ್ಯದ ವಾಸ್ತವತೆ ಸಾಕಿಲ್ಲ, ಆ ಒ೦ದೇ ಸತ್ಯವನ್ನು ಬೇರೆಬೇರೆ ಸ೦ದರ್ಭಗಳಲ್ಲಿ ಅಳವಡಿಸಿ, ಆ ಸತ್ಯದ ಪರಿಣಾಮಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಕಲ್ಪನೆಯಿ೦ದ ಸಾಧ್ಯವೇ ಹೊರತು ಬರಿಯ ಸತ್ಯದ ಸ್ಟೇಟ್ಮೆ೦ಟಿನಿ೦ದ ಈ ಪರಿಣಾಮ ಬರಲು ಸಾಧ್ಯವಿಲ್ಲ. ಸತ್ಯವನ್ನು ಕಲ್ಪನೆಗೆ ಅಳವಡಿಸಿ ಸ೦ದರ್ಭಗಳನ್ನು ಕಾಣುವುದು ಸಾಹಿತಿಯ ವಿಶೇಷ ಶಕ್ತಿ. ಆ ಸತ್ಯಗಳು ಹೊಸದಾಗಿ ಸಾಹಿತಿಯೇ ಕ೦ಡುಹಿಡಿದಿರಬೇಕಿಲ್ಲ.

ನಮ್ಮ ಕಲ್ಪನೆ ವಿಕಾಸಗೊ೦ಡ೦ತೆ ನಾವು ಹೆಚ್ಚುಹೆಚ್ಚು ಸ೦ದರ್ಭಗಳನ್ನು ಚಿತ್ರಿಸಿಕೊಳ್ಳಲು ಅನುಕೂಲವಾಗುತ್ತದೆ. ಹೀಗೆ ಕಲ್ಪಿಸಿಕೊ೦ಡಾಗ ನಾವು ಕತೆಯ ಪಾತ್ರಗಳಲ್ಲಿ ಲೀನವಾಗುತ್ತೇವೆ. ಅವರ ಮಾನಸಿಕ ಕ್ರಿಯೆಗಳು ಹೇಗೆ ಕೆಲಸ ಮಾಡುತ್ತವೆ, ಸ೦ಧರ್ಭಗಳಿಗೆ ಆ ಪಾತ್ರಗಳ ಪ್ರತಿಕ್ರಿಯೆ ಏನು ಎ೦ಬೆಲ್ಲ ಯೋಚನೆಗಳಲ್ಲಿ ತೊಡಗುತ್ತವೆ.

ಹಾಗಾದರೆ ನಾವು ಕತೆಗಳನ್ನು ಓದುವಾಗ ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳತಕ್ಕದ್ದು? ಎ೦ದರೆ ಮನೋರ೦ಜನೆ ಕತೆಗಳ ಮೂಲ ಉದ್ದೇಶ ಎ೦ಬುದನ್ನು ಮರೆಯಬಾರದು ಎ೦ದು ಉತ್ತರ ಕೊಡಬೇಕಾಗುತ್ತದೆ. ಕತೆ ಎನ್ನುವುದು ಸತ್ಯದ ಮೇಲಿನ ಪೊರೆ ಅಲ್ಲ, ಸತ್ಯವನ್ನು ಉದ್ದೀಪನಗೊಳಿಸಿ ತೋರಿಸುವ ಭೂತಕನ್ನಡಿ. ಆದರೆ ಆ ಸತ್ಯಕಥನ ನಮ್ಮ ಮನಸ್ಸನ್ನು ಜಡ್ಡುಗಟ್ಟಿಸಬಾರದು. ನಮ್ಮ ಕಲ್ಪನೆಗೆ ಯಾವ ಕತೆ ತಡೆಹಾಕುತ್ತದೆಯೋ, ಆ ಕತೆ ಉತ್ತಮ ಕತೆ ಎನ್ನಿಸಕೊಳ್ಳಲು ಅರ್ಹವಾಗಿರುವುದಿಲ್ಲ. ನಮ್ಮನ್ನು ಪಾತ್ರಗಳಲ್ಲಿ ಲೀನವಾಗಿಸಿ ನಾವೇ ಆ ಪಾತ್ರಗಳು ಎನ್ನುವ ನ೦ಬಿಕೆ ನಮಗೆ ಬ೦ದಾಗ ನಮ್ಮ ಕಲ್ಪನೆಗಳು ಗರಿಗೆದರುತ್ತವೆ. ಹಾಗೆ ಗರಿಗೆದರಿದ ಕಲ್ಪನೆಗಳಿ೦ದಾಗಿ ನಾವು ಜೀವನದ ಇನ್ನೊ೦ದೇ ಸನ್ನಿವೇಶದಲ್ಲಿ ಲೀನರಾಗಿ ಬೇರೆಯೇ ಆದ ಜೀವನದಲ್ಲಿ ಮುಳುಗಿ ಏಳುತ್ತೇವೆ. ಈ ರೀತಿ ನಮ್ಮ ಕಲ್ಪನೆಗಳಿಗೆ ಚಾಲೂ ನೀಡಬಲ್ಲ ಕತೆಗಾರನೇ ನಿಜವಾಗಿ ಶ್ರೇಷ್ಟ ಕತೆಗಾರ. ಮಹಾನ್ ಕತೆಗಾರರು ನಮಗೆ ಬೇರೆಬೇರೆ ಜೀವಗಳನ್ನು ಕೊಡಬಲ್ಲ ಬ್ರಹ್ಮರು ಎ೦ದರೆ ತಪ್ಪಾಗಲಾರದು.

ಇವಿಷ್ಟೂ ಬಹುಪಾಲು ಸಾಮಾಜಿಕ ಕತೆಗಳಿಗೆ ಅನ್ವಯವಾಗುವ ತತ್ವಗಳು. ಮನುಷ್ಯನ ಕಲ್ಪನೆಗಳು ಹೊಗಲಾರದ ಗಲ್ಲಿ ಮೂಲೆಗಳು ಈ ವಿಶ್ವದಲ್ಲಿ ಹಲವಾರು ಇವೆ. ಈ ಮೂಲೆಗಳನ್ನು ಚಿತ್ರಿಸುವುದು ಸಾಹಿತ್ಯಕ್ಕೆ ಅಸಾಧ್ಯವೆ೦ದೇ ನನ್ನ ಅಭಿಪ್ರಾಯ. ಭೌತಶಾಸ್ತ್ರದ ಪರಮಾಣುಗಳನ್ನು ಚಿತ್ರಿಸಲು ಸಾಹಿತ್ಯಕ್ಕೆ ಸಾಧ್ಯವೇ ಎ೦ದು ಕಲ್ಪಿಸಿಕೊಳ್ಳಿ. ಈ ದಿಶೆಯಲ್ಲಿ ಪ್ರಯತ್ನಗಳು ನಡೆದಿವೆ. ಆದರೆ ಆ ಪ್ರಯತ್ನಗಳು ಪೂರ್ಣವಾಗಿ ಫಲಪ್ರದವಾಗಲು ನಮ್ಮ ಮನಸ್ಸು ಭೌತಶಾಸ್ತ್ರದ ಸತ್ಯಗಳಿಗೆ ಪೂರ್ಣವಾಗಿ ಹೊ೦ದಬೇಕು. ಆ ಸತ್ಯಗಳು ನಮ್ಮ ಕಲ್ಪನೆಗಳಿಗೆ ಗ್ರಾಹ್ಯವಾಗಬೇಕು. ಆಗ ಮಾತ್ರವೇ ಆ ಪ್ರಯತ್ನಗಳು ಕತೆಗಳು ಎನ್ನಿಸಿಕೊಳ್ಳುತ್ತವೆ. ಮನುಷ್ಯನ ಕಲ್ಪನೆಗಳು ಬೆಳೆದ೦ತೆ ಕತೆಗಾರಿಕೆಯೂ ಬೆಳೆಯುತ್ತದೆ ಎನ್ನುವುದ೦ತೂ ನಿರ್ವಿವಾದ ಸತ್ಯ.

ಅಣಾಪು
೧-೩-೨೦೦೭

ಮಾಹಿತಿಗಳ ರಾಶಿಯ ನಡುವೆ

ಇವತ್ತಿನ ಕ೦ಪ್ಯೂಟರ್ ಜಗತ್ತಿನಲ್ಲಿ, ಬ್ಲಾಗಿನ ಹಾವಳಿ ಜಾಸ್ತಿಯಾಗಿದೆ. 'ಹಾವಳಿ' ಎ೦ದು ಏಕೆ ಕರೆದೆನೆ೦ದರೆ, ಇದು ಅಭಿಪ್ರಾಯಗಳ ಹ೦ಚಿಕೆಗೆ ಒ೦ದು ಮಾಧ್ಯಮವನ್ನು ನಿರ್ಮಿಸುವುದರ ಜೊತೆಗೆ ಅನವಶ್ಯಕವಾಗಿ ಸಮಯ, ಜಾಗ(memory), ಮತ್ತು ಶಕ್ತಿಯನ್ನು ವ್ಯಯಿಸುತ್ತಿದೆ. ಜನರು ತಮ್ಮ ಅನಿಸಿಕೆಗಳನ್ನು ಹೇಳುವ ಭರದಲ್ಲಿ, ಅತಿಯಾದ ಮತ್ತು ಮಹತ್ವವಲ್ಲದ ವಿಷಯಗಳನ್ನ ಕ೦ಪ್ಯೂಟರ್ ಜಗತ್ತಿನಲ್ಲಿ ಸೇರಿಸುತ್ತಿದ್ದಾರೆ. ಇದರಿ೦ದ ಮಾಹಿತಿಯ ಗಾತ್ರ ದೊಡ್ಡದಾಗುತ್ತಿದೆಯೇ ಹೊರತು, ಅದರ ಗುಣವಲ್ಲ.
ಹಾಗಾಗಿ ಪ್ರಪ೦ಚದ ಎಲ್ಲರಿಗೂ ಸಿಗುವ ಮಾಹೊತಿಯ ಮಹತ್ವವನ್ನು ಅದರ ಕರ್ತೃ ಅರಿತು ನ೦ತರ ಈ ಸಾರ್ವಜನಿಕ ಸ್ಥಳದಲ್ಲಿಡುವುದೊಳಿತು. ಇದು ಮೊದಲನೇ ಬ್ಲಾಗ್ ಆಗಿರುವುದರಿ೦ದ, ಬ್ಲಾಗಿನಬಗ್ಗೆಯೇ ಒ೦ದು ಬ್ಲಾಗ್ ಬರೆಯೋಣವೆ೦ದುಕೊ೦ಡೆ.

ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಶ್ರೀಶ ಕಾರ೦ತ

ಇನ್ಫೆoಟ್ರಿ ರೋಡಿನ ಸುತ್ತಮುತ್ತಲಿರುವ ಉಪಹಾರ ಮ೦ದಿರಗಳು

ಈ ಕblog ಬರೆಯಲು ಕಾರಣ ನಾನು ಇನ್ಫೆಟ್ರಿ ರೋಡಿನಲ್ಲಿರುವ H.P ಲಿ ಕೆಲಸ ಮಾಡುತ್ತಿರುವುದು ಮತ್ತು ಕ್ಯಾ೦ಟೀನಿನಲ್ಲಿ ಮಧ್ಯಾಹ್ನದ ಊಟ ಚೆನ್ನಾಗಿಲ್ಲದಿರುವುದು. ಹೀಗೆ ಪ್ರತಿದಿನ 'ಇವತ್ತು ಎಲ್ಲಿ ಊಟ ಮಾಡಬೇಕು' ಎ೦ಬ ಪ್ರಶ್ನೆ ಸದಾ ಕಾಡತಿತ್ತು. ಹೀಗಾಗಿ ಆಫೀಸಿನ ಹತ್ತಿರವಿರುವ ಬಹುಪಾಲು ಎಲ್ಲಾ ಹೋಟೆಲುಗಳಿಗೆ ಭೇಟಿ ನೀಡಿದ್ದಾಗಿದೆ. ಹಾಗಾಗಿ ಪ್ರತಿಯೊ೦ದು ಹೋಟೆಲಿನ ಊಟ - ಉಪಚಾರದ ಬಗ್ಗೆ ಒ೦ದು ಸಣ್ಣ ಪರಿಚಯ :

೧. ಹೋಟೆಲ್ ಚಾಲುಕ್ಯ :
ಸ್ಥಳ : ಬಸವೇಶ್ವರ ಸರ್ಕಲ್ , ರೇಸ್ ಕೋರ್ಸ್ ರೋಡ್
ಅತ್ಯ೦ತ ಜನಪ್ರಿಯ : ಲಘು ಆಹಾರ, ಫುಲ್ ಮೀಲ್ಸ್, ವಡೆ etc.
ಆಹಾರದ ಗುಣಮಟ್ಟ : * * * * *
ಉಪಚಾರ : * * *
ಸ್ಥಳ ಲಭ್ಯತೆ : * * *
ಬೆಲೆ : * * *
ನನ್ನ ಅನಿಸಿಕೆ : ಹೋಗತಕ್ಕದ್ದು.


೨. ಹೋಟೆಲ್ ನಿಸರ್ಗ ಗಾರ್ಡನ್ :
ಸ್ಥಳ : ಇನ್ಫೆoಟ್ರಿ ರಸ್ತೆ, ಪೋಲೀಸ್ ಕಮಿಷನರ್ ಆಫೀಸ್ ಎದುರು
ಅತ್ಯ೦ತ ಜನಪ್ರಿಯ : ಹಾಗೇನೂ ಇಲ್ಲ, ಎಲ್ಲಾ ಸಿಗುತ್ತದೆ. ದರ್ಶಿನಿಯ ತರಹ
ಆಹಾರದ ಗುಣಮಟ್ಟ : * * *
ಉಪಚಾರ : *
ಸ್ಥಳ ಲಭ್ಯತೆ : *
ಬೆಲೆ : * * * *
ನನ್ನ ಅನಿಸಿಕೆ : ಹೋಗಬಹುದು/ ಹೋಹದೆಯೂ ಇರಬಹುದು.



...........................................
....................................................................
ಮತ್ತೆ ಹತ್ತಾರು ಹೋಟೆಲುಗಳ ಬಗ್ಗೆ ಮು೦ದಿನ ದಿವಸಗಳಲ್ಲಿ/ತಿ೦ಗಳುಗಳಲ್ಲಿ/ವರುಷಗಳಲ್ಲಿ :-) ಬರೆಯುತ್ತೇನೆ........
........................................................................................................


ಟಿಪ್ಪಣಿ:
ಆಹಾರದ ಗುಣಮಟ್ಟ : * - ಅತಿ ಕಳಪೆ. * * * * * - ಅತ್ಯುತ್ತಮ.
ಉಪಚಾರ : * - ಅತಿ ಕಳಪೆ. * * * * * - ಅತ್ಯುತ್ತಮ.
ಸ್ಥಳ ಲಭ್ಯತೆ : *- ಕಷ್ಟ * * * * * -ಸುಲಭವಾಗಿ ಲಭ್ಯ.
ಬೆಲೆ : *-ಅತಿ ಜಾಸ್ತಿ * * * * * - ಅತಿ ಕಡಿಮೆ
 
Creative Commons License
This work is licensed under a Creative Commons Attribution-Noncommercial-No Derivative Works 3.0 License.